ತೈಸನಾಪ್ಟರ	-	
ಆತ್ರ್ರಾಪೊಡ ವಿಭಾಗದ ಇನ್ಸೆಕ್ಟ ವರ್ಗದ ಒಂದು ಗಣ. ಥ್ರಿಪ್ಸ್ ಎಂಬ ಹೆಸರಿನ ಕೀಟಗಳನ್ನು ಒಳಗೊಂಡಿದೆ. ಇವು ಬಹಳ ಸಣ್ಣ ಕೀಟಗಳು. ಗಾತ್ರ ಸುಮಾರು 1/25. ಆಸ್ಟ್ರೇಲಿಯದ ಕೆಲವು ದೊಡ್ಡ ಥ್ರಿಪ್ಸ್‍ಗಳ ಗಾತ್ರ ಸುಮಾರು 1/2. ಇವು ಉಪದ್ರವಕಾರಿಗಳು. ಉದಾಹರಣೆಗೆ: ಗ್ರೀನ್ ಹೌಸ್ ಥ್ರಿಪ್ಸ್, ಪಿಯರ್ ಥ್ರಿಪ್ಸ್, ಕಿತ್ತಳೆ ಥ್ರಿಪ್ಸ್ ಈರುಳ್ಳೀ, ಥ್ರಿಪ್ಸ್  ಇತ್ಯಾದಿ. ಕೆಲವು ವೈರಸ್ ರೋಗಗಳನ್ನು ಉದಾಹರಣೆಗೆ ಟೊಮ್ಯಾಟೊ ಅನಾನಸ್, ಹುರಳಿ, ಕಬ್ಬು, ಮೊದಲಾದ ಬೆಳೆಗಳ ವೈರಸ್ ರೋಗಗಳನ್ನು ಇವು ಹರಡುತ್ತವೆ. ಇವು ಸಂಖ್ಯೆಯಲ್ಲಿ ದುಂಬಿ ಇರುವೆಗಳಿಗಿಂತ ಹೆಚ್ಚಾಗಿದ್ದರೂ ವಿe್ಞÁನಿಗಳ ಗಮನಕ್ಕೆ ಬಂದಿಲ್ಲ. ಬಹುಶಃ ಇದಕ್ಕೆ ಕಾರಣ ಇವುಗಳ ಗಾತ್ರ. ಇದುವರೆಗೆ 3,000 ಜಾತಿಗಳನ್ನು ಮಾತ್ರ ವರ್ಣಿಸಲಾಗಿದೆ. ಇವು ಪ್ರಪಂಚದ ಎಲ್ಲ ಪ್ರದೇಶಗಳಲ್ಲೂ ಉಂಟು. ಸಸ್ಯಗಳ ಎಲ್ಲ ಭಾಗಗಳಿಗೂ ದಾಳಿಯಿಕ್ಕಿ ತಮ್ಮ ಬಾಯಿಯಿಂದ ಕರೆದು ಸಸ್ಯ ರಸವನ್ನು ಹೀರುತ್ತವೆ. ಕೆಲವು ಬಗೆಗಳು ಕೊಳೆಯುವ ಸಸ್ಯಭಾಗಗಳ, ಹಣ್ಣು, ಕೆಲವು ಕೀಟಗಳು, ನುಸಿಗಳಿಂದ ರಸವನ್ನು ಹೀರುವುದುಂಟು. ಮನುಷ್ಯರ ರಕ್ತವನ್ನು ಹೀರುವ ಬಗೆಯೂ ಉಂಟು. ಒಂದು ಗುಂಪಿನ ಥ್ರಿಪ್ಸ್‍ಗಳು ಶಿಲೀಂಧ್ರಗಳ ಬೀಜಕಗಳನ್ನು ತಿನ್ನುತ್ತವೆ. ಕೆಲವು ಒಂದೇ ಬಗೆಯ ಸಸ್ಯಗಳಿಗೆ ಅಂಟಿದರೆ ಇನ್ನು ಕೆಲವು ಎಲ್ಲ ಬಗೆಯ ಸಸ್ಯಗಳನ್ನು ಪೀಡಿಸುವವು. ಎಲೆಗಳಿಂದ ರಸವನ್ನು ಹೀರಿ ಅವುಗಳ ಅಂಚು ಮುದುಡುವಂತೆ ಮಾಡುತ್ತವೆ. ಸಸ್ಯಗಳ ಗಂಟುಗಳಲ್ಲಿ ವಾಸಿಸುವ ಬಗೆಗಗಳೂ ಉಂಟು. 

ಇವುಗಳ ಶರೀರ ಉದ್ದ ಹಾಗೂ ಸೂಕ್ಷ್ಮ, ಕುಡಿಮೀಸೆಗಳಲ್ಲಿ ಖಂಡಗಳುಂಟು. ಬಾಯ ಭಾಗಗಳು ಅಸಮವಾಗಿದೆ. ರೆಕ್ಕೆಗಳು ಉದ್ದವಾಗಿದೆ. ಇವುಗಳ ಅಂಚಿನಲ್ಲಿ ಕೂದಲಿನಂಥ ಕುಚ್ಚು ಉಂಟು. ಟಾರ್ಸಿ 2 ಖಂಡಗಳಿಂದ ರಚಿತವಾಗಿವೆ. ಇವುಗಳ ತುದಿಯಲ್ಲಿ ಸಣ್ಣ ಚೀಲವಿದ್ದು ಅತ್ಯಂತ ನುಣಪಾದ ಪಾತಳಿಗಳನ್ನೂ ಕೀಟಗಳು ಹತ್ತಬಲ್ಲವು. ಮರಿಗಳು ನೋಡೆಲು ವಯಸ್ಕಗಳಂತೆಯೇ ಇವೆ. ಪ್ರಾಯಕ್ಕೆ ಬರುವ ಮುಂಚೆ ಕೋಶಾವಸ್ಥೆಯಲ್ಲು ಕಳೆಯವವು. ಗಂಡು-ಹೆಣ್ಣುಗಳಿಗೆ ರೆಕ್ಕೆಗಳಿದ್ದರೂ ಕೆಲವು ಬಗೆಯ ಥ್ರಿಪ್ಸ್‍ಗಳಲ್ಲಿ ಗಂಡುಗಳಿಗೆ ರೆಕ್ಕೆಗಳಿಲ್ಲ. ಹಲವು ಜಾತಿಯವು ಗಂಡಿನ ಸಂಪರ್ಕವಿಲ್ಲದೆ ಸಂತಾನೋತ್ಪತ್ತಿ ಮಾಡುತ್ತವೆ. ಕೆಲವು ಜಾತಿಗಳಲ್ಲಿ ಗಂಡುಗಳೇ ಇಲ್ಲ. ಅನೇಕವು ಮೊಟ್ಟೆಗಳನ್ನಿಡುವುವಾದಾದರೂ ಕೆಲವು ಮರಿಗಳನ್ನೇ ಹಾಕುತ್ತವೆ.

ಈ ಗಣವನ್ನು ಟೆರೆಬ್ರಾನ್ಷಿಯ ಮತ್ತು ಟ್ಯುಬಿಲಿಫೆರ ಎಂಬ ಎರಡು ಉಪಗಣಗಳನ್ನಾಗಿ ವಿಭಾಗಿಸಲಾಗಿದೆ. ಟೆರೆಬ್ರಾನ್ಷಿಯದ ಕೀಟಗಳಲ್ಲಿ ಹೆಣ್ಣಿಗೆ ಗರಗಸದಂಥ ಅಂಡನಿಕ್ಷೇಪಕ ಉಂಟು. ಇದರ ಹೊಟ್ಟೆ ಚೂಪು. ಗಂಡಿನ ಹೊಟ್ಟೆ ಗುಂಡು. ಟ್ಯಬಿಲಿಫೆರದ ಹೆಣ್ಣಿಗೆ ಅಂಡಾನಿಕ್ಷೇಪಕ ಇಲ್ಲ. ಗಂಡು ಹೆಣ್ಣುಗಳೆರಡರಲ್ಲೂ ಹೊಟ್ಟೆ ಉದ್ದ. ಟೆರೆಬ್ರಾನ್ಷಿಯ ಪ್ರಾಚೀನ; ರೆಕ್ಕೆಗಳಲ್ಲಿ ದಿಂಡುಗಳು ಹೆಚ್ಚು. ರೆಕ್ಕೆ ಅಗಲ. ಸಸ್ಯಗಳ ರಸವನ್ನು ಹೀರುತ್ತವೆ. ಹೆಣ್ಣು ಅಂಡನಾಳಾಂಗದಿಂದ ಸಸ್ಯದ ಭಾಗವನ್ನು ಚುಚ್ಚಿ ಮೊಟ್ಟೆ ಇಡುತ್ತವೆ. ಬಾಲ್ಟಿಕ್ ಪ್ರದೇಶದಲ್ಲಿ ಕೆಲವು ಪಳೆಯುಳಿಕೆಗಳಿವೆ. ಟ್ಯುಬಿಲಿಫೆರ ಆಧುನಿಕಗಣ. ಇದರ ಕೀಟಗಳ ಕುಡಿಮೀಸೆಗಳಲ್ಲಿ ಖಂಡಗಳು ಕಡಿಮೆ ಸಂಖ್ಯೆಯಲ್ಲಿರುತ್ತವೆ. ಅಂಡನಾಳಾಂಗವಿಲ್ಲ. ರೆಕ್ಕೆಗಳು ಕಿರಿಯಗಲದವು ಒಂದೇ ದಿಂಡು ಉಂಟು. ಇವು ತೊಗಟೆಗಳ ಕೆಳಗೆ, ಶಿಲೀಂಧ್ರಗಳಲ್ಲಿ, ಎಲೆಗಳ ಕೆಳಗೆ ಇರುತ್ತವೆ. ಕೆಲವು ಮಾತ್ರ ಹೂಗಳಲ್ಲಿರುತ್ತವೆ. ಅಥವಾ ಮಾಂಸಾಹಾರಿಗಳು. ಈ ಗಣದಲ್ಲಿ ಪಳೆಯುಳಿಕೆಗಳಿಲ್ಲ. 
(ಪಿ.ಎಂ.;ಜಿ.ಪಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ